ಕೆನಡದ ಶಿಕ್ಷಣ ಪದ್ಧತಿ

1867ರ ಬ್ರಿಟಿಷ್ ನಾರ್ತ್ ಅಮೆರಿಕನ್ ಶಾಸನದ 93ನೆಯ ವಿಧಿಯ ಪ್ರಕಾರ ಕೆನಡದಲ್ಲಿ ಶಿಕ್ಷಣ ಆಯಾ ಪ್ರಾಂತ್ಯದ ಹೊಣೆಗಾರಿಕೆಯಾಗಿದೆ. ಹತ್ತು ಪ್ರಾಂತ್ಯಗಳುಳ್ಳ ಆ ಸಂಯುಕ್ತ ರಾಷ್ಟ್ರದಲ್ಲಿ (ಫೆಡರೇಷನ್) ಪ್ರತಿಪ್ರಾಂತ್ಯವೂ ತನ್ನದೇ ಆದ ಶಿಕ್ಷಣ ಶಾಖೆಯನ್ನು ಹೊಂದಿದ್ದು ಅಲ್ಲಿನ ಶಾಸನ ಸಭೆಯ ನಿರ್ಣಯಗಳಂತೆ ಕೆಲಸ ಮಾಡುತ್ತದೆ. ಪ್ರತಿ ಪ್ರಾಂತ್ಯದಲ್ಲೂ ಚುನಾಯಿಸಿ ಬಂದ ಅಥವಾ ನೇಮಕಗೊಂಡ ನಗರ, ಊರು ಅಥವಾ ಗ್ರಾಮದ ಶಾಲಾಮಂಡಳಿಗಳು ತಮ್ಮ ತಮ್ಮ ಕ್ಷೇತ್ರದ ಶಾಲೆಗಳನ್ನು ಪ್ರಾಂತೀಯ ನಿಯಮಗಳನ್ನನುಸರಿಸಿ ನಡೆಸಿಕೊಂಡು ಬರುತ್ತಿವೆ.

ಕೆನಡದಲ್ಲಿ ಸಾರ್ವಜನಿಕ ಶಿಕ್ಷಣ ಹನ್ನೆರಡು ಆಡಳಿತಕ್ಕೆ ಒಳಪಟ್ಟಿದೆ. ಕ್ವಿಬೆಕ್ಕನ್ನುಳಿದ ಒಂಬತ್ತು ಪ್ರಂತ್ಯಗಳ ಶಿಕ್ಷಣ ಆಯಾ ಪ್ರಾಂತ್ಯಗಳಿಗೇ ಸೇರಿದೆ. ಕ್ವಿಬೆಕ್ಕಿನ ಶಿಕ್ಷಣ ರೋಮನ್ ಕೆಥೊಲಿಕ್ ಮತ್ತು ಪ್ರಾಟೆಸ್ಟಂಟ್ ಎಂಬ ಎರಡು ಆಡಳಿತಗಳಿಗೆ ಸೇರಿದೆ. ಉತ್ತರದ ಮತ್ತು ವಾಯವ್ಯ ಪ್ರದೇಶಗಳ (ಗ್ರೇಟ್ ಟೆರಿಟೊರೀಸ್ ಆಫ್ ದಿ ನಾರ್ತ್ ಅಂಡ್ ನಾರ್ತ್ ವೆಸ್ಟ್) ಶಿಕ್ಷಣವೂ ಇಡೀ ಕೆನಡದ ಎಲ್ಲ ಪ್ರಾಂತ್ಯಗಳಲ್ಲಿನ ಇಂಡಿಯನ್ನರ ಶಿಕ್ಷಣವೂ ಫೆಡರಲ್ ಸರ್ಕಾರದ ಆಡಳಿತಕ್ಕೆ ಸೇರಿವೆ. ಹನ್ನೆರಡು ಆಡಳಿತಕ್ಕೊಳಪಟ್ಟಿರುವ ಕೆನಡದ ಶಿಕ್ಷಣವನ್ನು ಒಂದು ಪದ್ಧತಿಯೆಂದು ಪರಿಗಣಿಸುವುದು ಸ್ವಾಭಾವಿಕವಾಗಿ ಅಸಮಂಜಸವೆನಿಸಬಹುದಾದರೂ ಅಲ್ಲಿನ ವೈವಿಧ್ಯದ ನಡುವೆ ಸರ್ವಸಾಮಾನ್ಯ ಲಕ್ಷಣಗಳೂ ಕಂಡುಬರುತ್ತದೆ.

ಆಡಳಿತ ವ್ಯವಸ್ಥೆ

ಕ್ವಿಬೆಕ್ಕನ್ನುಳಿದು ಇತರ ಒಂಬತ್ತು ಪ್ರಾಂತ್ಯಗಳಲ್ಲಿ ಆಯಾ ಸರ್ಕಾರದ ಶಿಕ್ಷಣ ಶಾಖೆ ಅಲ್ಲಿನ ಶಿಕ್ಷಣ ಕ್ಷೇತ್ರದ ಆಡಳಿತವನ್ನು ನೋಡಿಕೊಳ್ಳುತ್ತದೆ. ಅಲ್ಲಿನ ಶಾಸನಸಭೆಗೆ ಹೊಣೆಗಾರರಾಗಿರುವ ಮಂತ್ರಿಮಂಡಲದ ಸದಸ್ಯರೊಬ್ಬರ ನೇತೃತ್ವದಲ್ಲಿ ಅದು ಕೆಲಸ ಮಾಡುತ್ತದೆ. ಉಪಸಚಿವರು ಅಥವಾ ಸೂಪರಿಂಟೆಂಡೆಂಟರು ಶಿಕ್ಷಣದ ಆಡಳಿತವನ್ನು ನೋಡಿಕೊಳ್ಳುತ್ತಾರೆ. ನ್ಯೂ ಫೌಂಡ್‍ಲೆಂಡಿನಲ್ಲಿ ರೋಮನ್ ಕೆಥೊಲಿಕ್, ಚರ್ಚ್ ಆಫ್ ಇಂಗ್ಲೆಂಡ್, ಯುನೈಟೆಡ್ ಚರ್ಚ್, ಸ್ಯಾಲ್ವೇಷನ್ ಆರ್ಮಿ ಮುಂತಾದ ಪ್ರತಿಯೊಂದು ಧಾರ್ಮಿಕ ಸಂಪ್ರದಾಯಕ್ಕೆ ಸೇರಿದ ಶಾಲೆಗಳ ಆಡಳಿತಕ್ಕೂ ಪ್ರತ್ಯೇಕವಾಗಿ ಒಬ್ಬೊಬ್ಬ ಪ್ರಧಾನ ಕಾರ್ಯನಿರ್ವಾಹಣಾಧಿಕಾರಿಯನ್ನು ನೇಮಿಸಿಕೊಳ್ಳುವ ಅವಕಾಶವಿದೆ. ಪ್ರತಿ ಪ್ರಾಂತ್ಯದಲ್ಲೂ ಅಲ್ಲಿನ ಶಿಕ್ಷಣ ಶಾಖೆ ಅಲ್ಲಿನ ಶಾಲೆಗಳ ಸಾಮಾನ್ಯ ಆಡಳಿತವನ್ನು ನೋಡಿಕೊಳ್ಳುವುದರ ಜೊತೆಗೆ ಮೇಲ್ವಿಚಾರಣೆಯನ್ನೂ (ತನಿಖೆ) ನಡೆಸುತ್ತದೆ. ಪ್ರಾಂತೀಯ ಸರ್ಕಾರದ ಸಹಾಯಧನವನ್ನು ಅವುಗಳಿಗೆ ಹಂಚುತ್ತದೆ; ಅಧ್ಯಾಪಕರ ವೃತ್ತಿಶಿಕ್ಷಣ, ಪಠ್ಯಕ್ರಮದ ನಿಷ್ಕರ್ಷೆ, ಅಂಗವಿಕಲರ ಪಾಠಶಾಲೆಗಳ ವ್ಯವಸ್ಥೆ, ಖಾಸಗಿ ಶಾಲೆಗಳ ಅಂಗೀಕಾರ, ಪರೀಕ್ಷಾ ವ್ಯವಸ್ಥೆ-ಈ ಕಾರ್ಯಗಳನ್ನೂ ನಿರ್ವಹಿಸುತ್ತದೆ; ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯಗಳು, ಕೈಗಾರಿಕಾ ಪಾಠಶಾಲೆಗಳು, ಸಂಚಾರಿ ಗ್ರಂಥಾಲಯಗಳು, ಅಂಚೆಶಿಕ್ಷಣ ಮುಂತಾದವನ್ನೂ ನಡೆಸುತ್ತದೆ.

ಕ್ವಿಬೆಕ್ಕಿನಲ್ಲಿ ಶಿಕ್ಷಣ ಎರಡು ಆಡಳಿತ ಶಾಖೆಗಳಿಗೆ ಸೇರಿದೆ. ಫ್ರೆಂಚ್-ಕೆನಡಿಯನ್ ಸಂಪ್ರದಾಯದ ರೋಮನ್ ಕೆಥೊಲಿಕ್ ಶಾಲೆಗಳ ಆಡಳಿತಕ್ಕೇ ಒಂದು ಶಾಖೆ. ಪ್ರಾಟೆಸ್ಟಂಟ್ ಶಾಲೆಗಳಿಗೇ ಇನ್ನೊಂದು ಆಡಳಿತ ಶಾಖೆ. ಭೂ, ನೌಕಾ ಮತ್ತು ವೈಮಾನಿಕ ಸೇನಾಶಿಕ್ಷಣದ ಕಾಲೇಜುಗಳನ್ನು ಕೆನಡದ ರಕ್ಷಣಾಶಾಖೆ ನೋಡಿಕೊಳ್ಳುತ್ತದೆ.

ಶಾಲಾ ಮಂಡಳಿಗಳು ತಮ್ಮ ತಮ್ಮ ಕ್ಷೇತ್ರದ ಶಾಲೆಗಳ ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುತ್ತವೆ. ಅವು ತಮ್ಮ ಭೌಗೋಳಿಕ ವ್ಯಾಪ್ತಿಯ ಪ್ರದೇಶದಲ್ಲಿ ನೂತರ ಶಾಲೆಗಳನ್ನು ಆರಂಭಿಸುತ್ತವೆ; ಅಧ್ಯಾಪಕರನ್ನು ನೇಮಿಸಿಕೊಳ್ಳುತ್ತವೆ; ಸಂಬಳ ಬಟವಾಡೆ ಮಾಡುತ್ತವೆ; ಕಟ್ಟಡಗಳ ನಿರ್ಮಾಣ ಮತ್ತು ದುರಸ್ತು ಕಾರ್ಯಗಳನ್ನೂ ನಿರ್ವಹಿಸುತ್ತವೆ. ಶಾಲೆಗಳಿಗೆ ಪೀಠೋಪಕರಣಗಳನ್ನೂ ಇತರ ಸಾಮಾನುಗಳನ್ನೂ ಒದಗಿಸಿಕೊಡುತ್ತವೆ; ಶಿಕ್ಷಣಕ್ಕಾಗಿ ಮೇಲ್ತೆರಿಗೆಯ ದರವನ್ನೂ ನಿರ್ಧರಿಸುತ್ತವೆ. ಸ್ಥಳೀಯ ಮೇಲ್ತೆರಿಗೆಯಿಂದ ಸಂಗ್ರಹಿಸುವ ಹಣದ ಜೊತೆಗೆ ಪ್ರಾಂತೀಯ ಸರ್ಕಾರದ ಧನಸಹಾಯವನ್ನೂ ಪಡೆಯುತ್ತವೆ.

ಶಿಕ್ಷಣ ವ್ಯವಸ್ಥೆ

ಪ್ರತಿ ಪ್ರಾಂತ್ಯವೂ ತನ್ನದೇ ಆದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಇಂಗ್ಲಿಷ್ ಮಾತನಾಡುವ ಪ್ರಾಂತ್ಯಗಳಲ್ಲಿ ಮಕ್ಕಳು 5-6ನೆಯ ವರ್ಷ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆಗೆ ಸೇರಿ ಎಂಟು ವರ್ಷಗಳ ಶಿಕ್ಷಣದ ಅನಂತರ ಪೌಢಶಾಲೆಗೆ ಬರುತ್ತಾರೆ. ಪ್ರೌಢಶಿಕ್ಷಣ ನಾಲ್ಕು ಅಥವಾ ಐದು ವರ್ಷಗಳ ಕಾಲಾವಧಿಯದಾಗಿದ್ದು ಅಲ್ಲಿನ ಶಿಕ್ಷಣ ಮುಗಿದ ಅನಂತರ ನಡೆಯುವ ಪರೀಕ್ಷೆಯೊಂದರ ಫಲಿತಾಂಶದ ಆಧಾರದ ಮೇಲೆ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ದೊರಕುತ್ತದೆ. ಬೇರೆ ಬೇರೆ ಪದವಿಗಳ ಶಿಕ್ಷಣದ ಕಾಲಾವಧಿ ಮೂರರಿಂದ ಏಳು ವರ್ಷಗಳವರೆಗೆ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಸಾಂಸ್ಕøತಿಕ ಶಿಕ್ಷಣದ ಪ್ರಥಮ ಪದವಿಯ ಕಾಲಾವಧಿ ಮೂರು ವರ್ಷ. ವೃತ್ತಿ ಮತ್ತು ತಾಂತ್ರಿಕ ಶಿಕ್ಷಣದ ಪದವಿಗಳ ಕಾಲಾವಧಿ ಸ್ವಲ್ಪ ಹೆಚ್ಚು. ಫ್ರೆಂಚ್ ಮಾತನಾಡುವ ಕ್ವಿಬೆಕ್ ಮತ್ತು ಇತರ ಕೆಲವು ಪ್ರಾಂತ್ಯಗಳಲ್ಲಿ ಶಿಕ್ಷಣ ವ್ಯವಸ್ಥೆ ಭಿನ್ನವಾಗಿದೆ. ಅಲ್ಲಿ ಆರು ಅಥವಾ ಏಳು ವರ್ಷಗಳ ಪ್ರಾಥಮಿಕ ಶಾಲೆಗಳೂ ಮೂರು ವರ್ಷಗಳ ಜೂನಿಯರ್ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳು ಚರ್ಚುಗಳು ನಡೆಸುತ್ತಿರುವ ಕಾಲೇಜ್ ಕ್ಲಾಸಿಕ್‍ಗಳಿಗೆ ಬೇಕಾದರೂ ಸೇರಿ ಅಲ್ಲಿ ಎಂಟು ವರ್ಷಗಳ ಶಿಕ್ಷಣ ಮುಗಿಸಿ ಪದವಿ ತರಗತಿಗೂ ವೃತ್ತಿಶಿಕ್ಷಣ ತರಗತಿಗೂ ಸೇರಬಹುದು. ಅಥವಾ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಪಬ್ಲಿಕ್ ಶಾಲೆಗಳಿಗಾದರೂ ಸೇರಬಹುದು. ತಾಂತ್ರಿಕ ಶಿಕ್ಷಣ, ಕೈಗಾರಿಕಾ ಶಿಕ್ಷಣ, ಕಲಾಶಿಕ್ಷಣ, ಗೃಹ ಅರ್ಥಶಾಸ್ತ್ರ ಶಿಕ್ಷಣ ಇತ್ಯಾದಿ ತರಗತಿಗಳಿಗೆ ಸೇರತಕ್ಕವರಿಗೆ ಅಲ್ಲಿ ಪೂರ್ವಭಾವಿ ಶಿಕ್ಷಣವನ್ನು ನೀಡಲಾಗುವುದು. ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳು ಪ್ರಯುಕ್ತ (ಅಪ್ಲೈಡ್) ವಿಜ್ಞಾನ ಶಿಕ್ಷಣ ಸಂಸ್ಥೆ. ವಾಣಿಜ್ಯ ಶಿಕ್ಷಣ ಸಂಸ್ಥೆ, ವ್ಯವಸಾಯ ಶಿಕ್ಷಣ ಸಂಸ್ಥೆ, ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರಿ ವಿಶ್ವವಿದ್ಯಾನಿಲಯಗಳ ವೃತ್ತಿ ಶಿಕ್ಷಣ ಪದವಿಗಳನ್ನು ಪಡೆಯಬಹುದು. ಪ್ರೌಢಶಾಲೆಯನ್ನು ಮುಗಿಸಿ ಪ್ರಾದೇಶಿಕ ಕೈಗಾರಿಕಾ ಪಾಠಶಾಲೆ ಅಥವಾ ವ್ಯವಸಾಯದ ಪಾಠಶಾಲೆಗಾದರೂ ಸೇರಬಹುದು.

ಪ್ರಾಥಮಿಕ ಪೂರ್ವದ ಶಿಕ್ಷಣ: ಸದ್ಯದಲ್ಲಿ ಪ್ರಾಥಮಿಕ ಪೂರ್ವದ ಶಿಕ್ಷಣವನ್ನು ಕಡ್ಡಾಯ ಮಾಡಿಲ್ಲ. ರಾಷ್ಟ್ರದ ಅನೇಕ ಭಾಗಗಳಲ್ಲಿ ಅದರ ಸೌಲಭ್ಯವೂ ಏರ್ಪಟ್ಟಿಲ್ಲ. ಸರ್ಕಾರ ಈ ಹಂತದ ಶಿಕ್ಷಣವನ್ನು ಇನ್ನೂ ತನ್ನ ಹೊಣೆಗಾರಿಕೆಗೆ ತೆಗೆದುಕೊಂಡಿಲ್ಲ. ಅಲ್ಲಲ್ಲಿ ಇರತಕ್ಕ ಸೌಲಭ್ಯಗಳು ಸರ್ಕಾರೇತರ ಸಂಸ್ಥೆಗಳಿಂದ ಏರ್ಪಟ್ಟಿರುತ್ತವೆ. 

ಕೆನಡದಲ್ಲಿ ಪ್ರೊಬೆಲ್ಲನ ಕಿಂಡರ್‍ಗಾರ್ಟನ್ ಶಿಶುಶಾಲೆಗಳು ಪ್ರಚಾರದಲ್ಲಿವೆ. 18ನೆಯ ಶತಮಾನದ ಆದಿಯಲ್ಲೆ ಇಂಥ ಶಾಲೆಗಳು ಆರಂಭವಾಗಿದ್ದರೂ ಕಳೆದ ಅರ್ಧ ಶತಮಾನದಿಂದ ಅವು ಜನಪ್ರಿಯವಾಗುತ್ತಿವೆ. ಮಕ್ಕಳ ಸಾಮಾಜಿಕ, ಬೌದ್ಧಿಕ, ಭಾವಾತ್ಮಕ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಇಂಥ ಸಂಸ್ಥೆಗಳು ಎಷ್ಟು ಅಗತ್ಯವೆಂಬುದನ್ನು ಅರಿತಂತೆ ಅವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಸಾಮಾನ್ಯವಾಗಿ ಈ ಶಾಲೆಗಳು ಮೂರು ವರ್ಷದ ಮಕ್ಕಳನ್ನು ಸೇರಿಸಿಕೊಂಡು ಆರು ವರ್ಷದ ತನಕ ಶಿಕ್ಷಣವೀಯುತ್ತವೆ.

ಪ್ರಾಥಮಿಕ ಶಿಕ್ಷಣ

ಪ್ರತಿ ಪ್ರಾಂತ್ಯವೂ ತನ್ನದೇ ಆದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವುದರಿಂದ ಪ್ರಾಥಮಿಕ ಶಿಕ್ಷಣದ ಕಾಲಾವಧಿಯಲ್ಲಿ ಎಲ್ಲ ಪ್ರಾಂತ್ಯಗಳಲ್ಲೂ ಒಂದೇ ಸಮನಾಗಿಲ್ಲ. ಕಡ್ಡಾಯ ಶಿಕ್ಷಣದ ಕಾಲಾವಧಿಯಲ್ಲೂ ವ್ಯತ್ಯಾಸ ಕಂಡು ಬರುತ್ತದೆ. ಸಾಮಾನ್ಯವಾಗಿ 15-16ನೆಯ ವರ್ಷದ ತನಕ ಶಿಕ್ಷಣವನ್ನು ಕಡ್ಡಾಯ ಮಾಡಲಾಗಿದೆ. ಇದು ಪ್ರಾಂತೀಯ ಮತ್ತು ಪ್ರಾದೇಶಿಕ ಸ್ಥಿತಿಗತಿಗಳನ್ನನುಸರಿಸಿ ವ್ಯತ್ಯಾಸವಾಗುತ್ತದೆ. ಫೆಡರಲ್ ಸರ್ಕಾರ ಪ್ರಾಂತೀಯ ಸರ್ಕಾರಗಳಿಗೆ ಪ್ರಾಥಮಿಕ ಶಿಕ್ಷಣಕ್ಕಾಗಿ ಸಹಾಯಧನ ನೀಡುತ್ತಿಲ್ಲ. ಆದ್ದರಿಂದ ಕಡ್ಡಾಯ ಶಿಕ್ಷಣದ ಸೌಲಭ್ಯ ಆಯಾ ಪ್ರಾಂತ್ಯದ ಆರ್ಥಿಕ ಶಕ್ತಿಯನ್ನವಲಂಬಿಸಿ ಹೆಚ್ಚು ಕಡಿಮೆಯಾಗುತ್ತದೆ. 
ಎಲ್ಲ ಪ್ರಾಂತ್ಯಗಳಲ್ಲೂ ಪ್ರಾಥಮಿಕ ಶಾಲೆಯ ಕಟ್ಟಡಗಳು ಸರಳವಾಗಿದ್ದರೂ ಅಲ್ಲಿನ ಚಳಿಯ ವಾತಾವರಣದಿಂದ ಮಕ್ಕಳಿಗೆ ರಕ್ಷಣೆ ದೊರಕುವಂತೆ ನಿರ್ಮಾಣವಾಗಿವೆ. ಬಹುಮಟ್ಟಿಗೆ ಅವು ಒಂದಂತಸ್ತಿನ ಮಹಡಿ ಮನೆಗಳಾಗಿವೆ. ಅಲ್ಲಿ, ಒಳಭಾಗವನ್ನು ಶಾಖವಾಗಿರಿಸುವ ವ್ಯವಸ್ಥೆಯೂ ಗಾಳಿಬೆಳಕುಗಳು ಬರುವ ವ್ಯವಸ್ಥೆಯೂ ಸಮರ್ಪಕವಾಗಿ ಏರ್ಪಟ್ಟಿರುತ್ತವೆ. ಮಕ್ಕಳ ವೈದ್ಯಕೀಯ ಪರೀಕ್ಷೆಗೆಂದು ಪ್ರತ್ಯೇಕ ಕೊಠಡಿಯೊಂದಿರುತ್ತದೆ.

ಕೆನಡದಲ್ಲಿ ಒಂದೇ ಕೊಠಡಿಯ ಶಾಲೆಗಳೂ ಉಂಟು. ಅವು ಬಹುಮಟ್ಟಿಗೆ ಗ್ರಾಮಾಂತರ ಪ್ರದೇಶಗಳಲ್ಲಿದ್ದು ಸಂಖ್ಯೆಯಲ್ಲಿ 1500ಕ್ಕಿಂತ ಹೆಚ್ಚಾಗಿವೆ. ಈಚೆಗೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಂಪ್ರದಾಯಿಕ ಪಠ್ಯವಿಷಯಗಳ ಬೋಧನೆಯ ಜೊತೆಗೆ ಮಕ್ಕಳಿಗೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶವನ್ನೂ ಅಲ್ಲಿ ಕಲ್ಪಿಸಲಾಗಿದೆ. ಯಾವ ಒಂದು ರೀತಿಯ ಬೋಧನ ಕ್ರಮವನ್ನು ಮಾಮೂಲಿಯಾಗಿ ಅನುಸರಿಸದೆ ಅಗತ್ಯಕ್ಕೆ ತಕ್ಕಂತೆ ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಓದು ಬರೆಹ ಲೆಕ್ಕಗಳ ಜೊತೆಗೆ ಸಾಮಾನ್ಯ ವಿಜಾÐನ, ಸಾಮಾಜಿಕ ಪಾಠ, ಇಂಗ್ಲಿಷ್ ಅಥವಾ ಫ್ರೆಂಚ್ ಭಾಷೆ ಮತ್ತು ಸಾಹಿತ್ಯ, ಸಂಗೀತ, ಚಿತ್ರ ಬರೆಯುವುದು-ಇವು ಇಲ್ಲಿ ಬೋಧಿಸುವ ವಿಷಯಗಳು. 5,6ನೆಯ ತರಗತಿಗಳಿಂದ ಸಮಾಜ ಪಾಠವನ್ನು ಚರಿತ್ರೆ, ಭೂವಿವರಣೆ ಮುಂತಾದ ಪ್ರತ್ಯೇಕ ವಿಷಯಗಳಾಗಿ ಬೋಧಿಸುವುದುಂಟು. ಎಲ್ಲ ಪ್ರಾಂತ್ಯಗಳಲ್ಲೂ ಧಾರ್ಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅದಕ್ಕಿರುವ ಕಾಲದ ಪ್ರಮಾಣ ವ್ಯತ್ಯಾಸವಾಗುತ್ತದೆ. ಕ್ವಿಬೆಕ್ಕಿನ ಕೆಥೊಲಿಕ್ ಶಾಲೆಗಳಲ್ಲಿ ಮಕ್ಕಳಿಗೆ ಪೂರ್ಣ ಪ್ರಮಾಣದ ಕಾರ್ಯಕ್ರಮವನ್ನು ಅದಕ್ಕಾಗಿ ಗೊತ್ತುಮಾಡಿದೆ. ಅದೇ ಪ್ರಾಂತ್ಯದ ಪ್ರಾಟೆಸ್ಟಂಟ್ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಅಷ್ಟೊಂದು ಕಾಲವನ್ನು ವಿನಿಯೋಗಿಸುವುದಿಲ್ಲ.

ಪ್ರೌಢಶಿಕ್ಷಣ

ಪ್ರೌಢಶಿಕ್ಷಣ ನಾಲ್ಕು ಅಥವಾ ಐದು ವರ್ಷದ್ದಾಗಿದ್ದು 85ರಿಂದ 140 ಐಕ್ಯು (Iಕಿ)ಉಳ್ಳ ಬಾಲಕರನ್ನು ಆಕರ್ಷಿಸುತ್ತದೆ. ಪ್ರತಿ ಪ್ರಾಂತ್ಯದಲ್ಲೂ ಆಯಾ ಪ್ರಾಂತೀಯ ಸರ್ಕಾರದ ಶಿಕ್ಷಣ ಶಾಖೆ ಪ್ರೌಢಶಾಲೆಯೇ ಆಗಲಿ ತನ್ನ ಅರ್ಹತಾ ಪತ್ರದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ದೊರಕಿಸಿಕೊಡುವಂತಿಲ್ಲ. ಶಿಕ್ಷಣಶಾಖೆ ನಡೆಸುವ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಅಲ್ಲಿಗೆ ಪ್ರವೇಶಾವಕಾಶ ಸಿಕ್ಕುವುದು.

ಪ್ರೌಢಶಾಲೆಗಳಲ್ಲಿ ಮೂರು ಮಟ್ಟದ ಪಠ್ಯಕ್ರಮವನ್ನು ಅನುಸರಿಸಲಾಗುತ್ತದೆ. ತೀರ ಪ್ರತಿಭಾವಂತರಾಗಿದ್ದು ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ತೆರಳುವವರಿಗೇ ಇನ್ನೊಂದು ಪಠ್ಯಕ್ರಮ; ಪ್ರೌಢಶಾಲೆಯ ಶಿಕ್ಷಣವನ್ನೇ ತಮ್ಮ ಅಂತಿಮ ಶಿಕ್ಷಣವೆಂದು ಭಾವಿಸಿ ಮುಂದೆ ವಿಶ್ವವಿದ್ಯಾಲಯಕ್ಕಾಗಲಿ ವೃತ್ತಿ ಶಿಕ್ಷಣಕ್ಕಾಗಲಿ ಹೋಗುವ ಬಯಕೆಯಿಲ್ಲದವರಿಗಾಗಿಯೇ ಇನ್ನೊಂದು ಪಠ್ಯಕ್ರಮ. ಪಠ್ಯಕ್ರಮದಲ್ಲಿ ಆಯಾ ಉದ್ದೇಶಕ್ಕೆ ತಕ್ಕಂತೆ ವ್ಯತ್ಯಾಸವನ್ನು ಕಲ್ಪಿಸಿದೆ. ವಿಶ್ವವಿದ್ಯಾಲಯಕ್ಕೆ ಹೋಗತಕ್ಕವರಿಗೆ ವಿಷಯಗಳ ಆಳವಾದ ಪರಿಚಯವೂ ವೃತ್ತಿಶಿಕ್ಷಣಕ್ಕೆ ಹೋಗತಕ್ಕವರಿಗೆ ಆಯಾ ವೃತ್ತಿಗೆ ನೆರವಾಗತಕ್ಕ ವೃತ್ತಿಪರ ವಿಷಯಗಳ ಪರಿಚಯವೂ ಸಿಕ್ಕಲವಕಾಶವಿದೆ. ವೃತ್ತಿಗಾಗಲೀ ವಿಶ್ವವಿದ್ಯಾಲಯಕ್ಕಾಗಲಿ ಹೋಗಲೆಳಸದವರಿಗೆ ವಿಷಯಗಳ ವಿಶಾಲವೂ ಸಾಮಾನ್ಯವೂ ಆದ ಪರಿಚಯವನ್ನು ಕೊಡಲಾಗುತ್ತದೆ. ಆದರೆ ಈ ಮೂರು ವಿಧವಾದ ಪಠ್ಯಕ್ರಮಗಳು ಎಲ್ಲ ಪ್ರೌಢಶಾಲೆಗಳಲ್ಲೂ ಇರುವುದಿಲ್ಲ. ಗ್ರಾಮಾಂತರ ಪಾಠಶಾಲೆಗಳಲ್ಲಿ ವೃತ್ತಿಪರ ಪಠ್ಯಕ್ರಮ ಅಷ್ಟಾಗಿ ಕಂಡುಬರುವುದಿಲ್ಲ. ಎಲ್ಲ ವಿದ್ಯಾರ್ಥಿಗಳೂ ಮೂಲ ಪಠ್ಯವಿಷಯಗಳನ್ನು (ಕೋರ್ ಸಬ್ಜಕ್ಟ್) ಕಡ್ಡಾಯವಾಗಿ ವ್ಯಾಸಂಗ ಮಾಡುವುದರ ಜೊತೆಗೆ ಐಚ್ಛಿಕ ವಿಷಯವನ್ನೂ ಅಧ್ಯಯನ ಮಾಡಬೇಕು.

ಪ್ರೌಢಶಾಲೆಗೆ ಸೇರಿದವರಲ್ಲಿ ಸುಮಾರು 59% ಬಾಲಕರೂ 51% ಬಾಲಕಿಯರೂ ಕಡ್ಡಾಯ ಶಿಕ್ಷಣದ ವಯೋಮಿತಿಯನ್ನು ಮುಟ್ಟಿದೊಡನೆ ಶಾಲೆಯನ್ನು ಬಿಟ್ಟು ಬಿಡುತ್ತಾರೆ. ಅವರೆಲ್ಲ ಕಡ್ಡಾಯ ಶಿಕ್ಷಣದ ವಯೋಮಿತಿಯನ್ನು ಮುಗಿಸುವುದಕ್ಕಾಗಿಯೇ ಶಿಕ್ಷಣವನ್ನು ಅಲ್ಲಿನತನಕ ಮುಂದುವರಿಸತಕ್ಕವರು (ಲೀವರ್ಸ್).

ಕೆನಡದ ಪ್ರೌಢಶಾಲೆಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಆಟಗಳು ಇವೆಲ್ಲಕ್ಕೂ ಒಳ್ಳೆಯ ವ್ಯವಸ್ಥೆ ಮಾಡಿರುತ್ತಾರೆ. ಈಚೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನದ ಕಾರ್ಯಕ್ರಮವನ್ನೂ ಆಚರಣೆಗೆ ತರಲಾಗಿದೆ.

ಕೆನಡದ ಗ್ರಾಮಾಂತರ ಪ್ರದೇಶಗಳಲ್ಲಿ `ಕಾಂಪೊಸಿಟ್ ಹೈಸ್ಕೂಲುಗಳೆಂಬ ನೂತನ ಪ್ರೌಢಶಾಲೆಗಳು ಜನಪ್ರಿಯವಾಗುತ್ತಿವೆ. ಅಲ್ಲಿ ಗ್ರಾಮಜೀವನಕ್ಕೆ ಅಗತ್ಯವೆನಿಸುವ ಸಾಂಸ್ಕøತಿಕ ಮತ್ತು ವೃತ್ತಿ ಶಿಕ್ಷಣವನ್ನು ಕೊಡುವುದರ ಜೊತೆಗೆ ಗ್ರಾಮಜೀವನಕ್ಕೆ ಹೊಂದಿಕೊಂಡು ಬಾಳುವ ಮನೋಭಾವವನ್ನೂ ಬೆಳಸಲಾಗುವುದು. ಜನರು ಒಳನಾಡಿನಿಂದ ಮಿತಿಯಿಲ್ಲದೆ ಬಂದು ನಗರಗಳನ್ನು ಸೇರಿಕೊಳ್ಳುವ ಪ್ರವೃತ್ತಿಯನ್ನು ತಪ್ಪಿಸಿ ಗ್ರಾಮಾಂತರ ಜನಜೀವನವನ್ನು ಸಮೃದ್ಧಗೊಳಿಸಲು ಈ ಶಾಲೆಗಳು ನೆರವಾಗುತ್ತಿವೆಯಿಂದು ಹೇಳಲಾಗಿದೆ.

ಉನ್ನತ ಶಿಕ್ಷಣ

ಕೆನಡದಲ್ಲಿ ಉನ್ನತ ಶಿಕ್ಷಣಕ್ಕಾಗಿ ಮೀಸಲಾಗಿರುವ ಸುಮಾರು ಮುನ್ನೂರು ಸಂಸ್ಥೆಗಳಿವೆ. ಅವೆಲ್ಲ ಒಂದಲ್ಲ ಒಂದು ವಿಶ್ವವಿದ್ಯಾಲಯದ ಪಠ್ಯಕ್ರಮವನ್ನು ಅನುಸರಿಸುತ್ತವೆ. ಅವುಗಳಲ್ಲಿ ಐವತ್ತು ಸಂಸ್ಥೆಗಳು ಪದವಿ ನೀಡುವ ಅಧಿಕಾರ ಪಡೆದಿವೆ. ಮಿಕ್ಕವು ಪದವಿ ನೀಡುವ ಸಂಸ್ಥೆಗಳ ಘಟಕ ಸಂಸ್ಥೆಗಳಾಗಿವೆ. ಪ್ರತಿಪ್ರಾಂತ್ಯವೂ ತನ್ನದೇ ಅದ ವಿಶ್ವವಿದ್ಯಾಲಯವನ್ನೊ ಅದರಂತೆ ಪದವಿ ನೀಡುವ ಕಾಲೇಜನ್ನೊ ಹೊಂದಿರುತ್ತದೆ. ಸಾಮಾನ್ಯವಾಗಿ ಎಲ್ಲ ವಿಶ್ವವಿದ್ಯಾಲಯಗಳೂ ಕಲೆ, ವಿಜ್ಞಾನ, ಎಂಜಿನಿಯರಿಂಗ್, ವೈದ್ಯ, ನ್ಯಾಯ ದೇವತಾಶಾಸ್ತ್ರ ಮುಂತಾದ ವಿಷಯಗಳ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿವೆ. ಎರಡನೆಯ ಮಹಾಯುದ್ಧದವರೆಗೂ ಕೆನಡದಲ್ಲಿ ಸ್ನಾತಕೋತ್ತರ ತರಗತಿಗಳ ಶಿಕ್ಷಣ ಮತ್ತು ಸಂಶೋಧನೆ ಅಷ್ಟಾಗಿ ಅಭಿವೃದ್ಧಿಯಾಗಿರಲಿಲ್ಲ. ಟಾರಂಟೋ ಮತ್ತು ಮ್ಯಾಗ್ಗಿಲ್ ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಆ ಸೌಲಭ್ಯ ಕಲ್ಪಿಸಲಾಗಿತ್ತು. ಆದ್ದರಿಂದ ಅಲ್ಲಿನ ವಿದ್ಯಾರ್ಥಿಗಳು ಉಚ್ಚಶಿಕ್ಷಣಕ್ಕಾಗಿ ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೊ ಯುರೋಪಿಗೊ ಹೋಗುತ್ತಿದ್ದರು. ಅಲ್ಲದೆ ಹಾಗೆ ಶಿಕ್ಷಣಕ್ಕಾಗಿ ಹೋದವರನೇಕರು ಆಯಾದೇಶಗಳಲ್ಲೆ ಉದ್ಯೋಗನಿರತರಾಗಿ ಮಾತೃಭೂಮಿಗೆ ಹಿಂದಿರುಗುತ್ತಿರಲಿಲ್ಲ್ಲ. ಪ್ರತಿಭೆಯ ಈ ಸೋರುವಿಕೆಯನ್ನು (ಬ್ರೇನ್ ಡ್ರೇನ್) ತಪ್ಪಿಸಲು ಈಚೆಗೆ ಅನೇಕ ವಿಶ್ವವಿದ್ಯಾಲಯಗಳು ತಮ್ಮಲ್ಲೇ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಗಳಿಗೆ ಅವಕಾಶ ಕಲ್ಪಿಸಿಕೊಂಡಿವೆ.
ಹ್ಯಾಲಿಫ್ಯಾಕ್ಸ್‍ನ ಕಿಂಗ್ಸ್ ಕಾಲೇಜ್ (1789)ವಿಶ್ವವಿದ್ಯಾಲಯ ಫೆಡರಿಕ್ಟನ್ನಿನ ನ್ಯೂ ಬ್ರನ್‍ಸ್óವಿಕ್ ವಿಶ್ವವಿದ್ಯಾಲಯ (1785) ಕೆನಡದ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳು. ಮ್ಯಾಗ್ಗಿಲ್, ಟಾರಂಟೋ, ಕ್ವೀನ್ಸ್ ಮತ್ತು ಮ್ಯಾರಿಟೈಂ ಪ್ರಾಂತ್ಯಗಳು, ಕ್ವಿಬೆಕ್ ಮತ್ತು ಆಂಟೆರಿಯೋದಲ್ಲಿನ ಧಾರ್ಮಿಕ ಸಂಪ್ರದಾಯದ ಕಾಲೇಜುಗಳು ರಾಜ್ಯಗಳ ಒಕ್ಕೂಟವಾಗುವ ವೇಳೆಗೆ ಆರಂಭವಾಗಿದ್ದವು. ಪಶ್ಚಿಮ ಭಾಗದಲ್ಲಿರುವ ವಿಶ್ವವಿದ್ಯಾಲಯಗಳು ಈಚೆಗೆ ಸ್ಥಾಪನೆಯಾದವು. ಅವೆಲ್ಲ ಪ್ರಾಂತ ಸರ್ಕಾರಗಳಿಂದ ಸ್ಥಾಪಿತವಾಗಿದ್ದು ರಾಜ್ಯದ ಹಣದಿಂದ ನಡೆದುಕೊಂಡು ಬರುತ್ತಿವೆ. ಅಲ್ಲಿ ಲೌಕಿಕ ಶಿಕ್ಷಣಕ್ಕೆ ಪ್ರಾಧಾನ್ಯವಿದ್ದು, ಅವೆಲ್ಲ ಪದವಿ ನೀಡುವ ಆಧಿಕಾರ ಪಡೆದಿವೆ. ಪಶ್ಚಿಮದ ಈ ವಿಶ್ವವಿದ್ಯಾಲಯಗಳಲ್ಲಿ ಮ್ಯಾನಿಟೋಬ ವಿಶ್ವವಿದ್ಯಾಲಯ ಟಾರಂಟೋ ವಿಶ್ವವಿದ್ಯಾಲಯದಂತೆ ಅತ್ಯಂತ ಹಳೆಯದಾಗಿದ್ದು ರಾಜ್ಯದ ಮತ್ತು ಧಾರ್ಮಿಕ ಸಂಸ್ಥೆಗಳ ಒಕ್ಕೂಟದಿಂದಾಗಿದೆ. ಆಲ್ಬರ್ಟ ಮತ್ತು ಸ್ಯಾಸ್ಕ್ಯಾಚೆವನ್ ವಿಶ್ವವಿದ್ಯಾಲಯಗಳು ಈ ಶತಮಾನದ ಮೊದಲ ದಶಕದಲ್ಲಿ ಆರಂಭವಾದುವು ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾಲಯ ಅಂತ್ಯಂತ ದಶಕದಲ್ಲಿ ಆರಂಭವಾದದ್ದು.

ಫ್ರೆಂಚ್ ಮತ್ತು ಇಂಗ್ಲಿಷ್ ಭಾಷಾ ವಿಶ್ವವಿದ್ಯಾಲಯಗಳು ಕೆಲವು ಪ್ರಧಾನ ವ್ಯತ್ಯಾಸಗಳನ್ನು ವ್ಯಕ್ತಪಡಿಸುತ್ತವೆ. ಫ್ರೆಂಚ್ ಭಾಷಾ ವಿಶ್ವವಿದ್ಯಾಲಯಗಳು ಉದಾರ ಕಲಾಶಾಸ್ತ್ರಗಳು, ತತ್ವಶಾಸ್ತ್ರ, ಲಾಕ್ಷಣಿಕ ಶಾಸ್ತ್ರಗಳು, ಇತಿಹಾಸ, ಸಾಹಿತ್ಯ ಮುಂತಾದ ವಿಷಯಗಳ ವ್ಯಾಸಂಗಕ್ಕೆ ಮಹತ್ತ್ವ ನೀಡುತ್ತವೆ; ಈಚೆಗೆ ವೃತ್ತಿ ವಿದ್ಯಗಳನ್ನು ಆರಂಭಿಸಲಾಗಿದೆ. ಇವೆಲ್ಲ ಮುಖ್ಯವಾಗಿ ಕ್ವಿಬೆಕ್ ಪ್ರಾಂತ್ಯದಲ್ಲಿವೆ. ಇಂಗ್ಲಿಷ್ ಭಾಷಾ ವಿಶ್ವವಿದ್ಯಾಲಯಗಳು ಕ್ವಿಬೆಕ್ಕಿನಲ್ಲೂ ಇತರ ಪ್ರಾಂತ್ಯಗಳಲ್ಲೂ ಇವೆ. ಇಲ್ಲಿನ ವಿದ್ಯಾರ್ಥಿಗಳು ಪ್ರಥಮ ಪದವಿಯನ್ನು ಪಡೆದ ಮೇಲೆ ಅಥವಾ ಅದರೊಂದಿಗೇ ಸ್ನಾತಕೋತ್ತರ ಶಿಕ್ಷಣವನ್ನೊ ವೃತ್ತಿಶಿಕ್ಷಣವನ್ನೊ ಪಡೆಯುವರು. ಇವುಗಳಲ್ಲಿ ವೃತ್ತಿ ವಿದ್ಯೆಗಳಿಗೂ ಅನ್ವಿತ ವಿಜ್ಞಾನಗಳಿಗೂ ಹೆಚ್ಚಿನ ಪ್ರಾಧಾನ್ಯವುಂಟು.

ಕೆನಡದಲ್ಲಿ ಎಷ್ಟು ವಿಶ್ವವಿದ್ಯಾಲಯಗಳಿವೆಯೆಂದು ನಿಖರವಾಗಿ ಹೇಳುವುದಾಗದು. ಏಕೆಂದರೆ ಅಲ್ಲಿನ ವಿಶ್ವವಿದ್ಯಾಲಯಗಳಿಗೂ ಪದವಿ ನೀಡುವ ಕಾಲೇಜುಗಳಿಗೂ ವ್ಯತ್ಯಾಸ ಕಲ್ಪಿಸುವುದು ಕಷ್ಟ; ಅಲ್ಲದೆ ಅನೇಕ ಕಾಲೇಜುಗಳು ವಿಶ್ವವಿದ್ಯಾಲಯವೆಂಬ ಹೆಸರನ್ನೂ ಬಳಸುತ್ತವೆ. ವಿಶ್ವವಿದ್ಯಾಲಯವೆಂದು ಕರೆದುಕೊಳ್ಳುವ ಕೆಲವು ಸಂಸ್ಥೆಗಳು ತಮ್ಮವೇ ಆದ ಪದವಿಯನ್ನು ನೀಡುತ್ತಿಲ್ಲ. ಅಂತು ಕೆನಡಿಯನ್ ವಿಶ್ವವಿದ್ಯಾಲಯಗಳ ಸಂಘದಲ್ಲಿ ಒಟ್ಟು 36 ವಿಶ್ವವಿದ್ಯಾಲಯಗಳು ಪಟ್ಟಿಯಾಗಿವೆ.

ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಶುಲ್ಕ, ಶ್ರೀಮಂತರೂ ಸಂಘ ಸಂಸ್ಥೆಗಳೂ ನೀಡಿರುವ ಪುದುವಟ್ಟುಗಳು, ಪ್ರಾಂತೀಯ ಮತ್ತು ಫೆಡರಲ್ ಸಕಾರಗಳ ಸಹಾಯಧನ-ಈ ಆದಾಯ ಮೂಲಗಳಿಂದ ತಮ್ಮ ವೆಚ್ಚಕ್ಕೆ ಹಣವನ್ನು ಪಡೆದುಕೊಳ್ಳುತ್ತವೆ.
ಸಾಮಾನ್ಯವಾಗಿ ಎಲ್ಲ ವಿಶ್ವವಿದ್ಯಾಲಯಗಳೂ ಪ್ರಸಾರಾಂಗಗಳನ್ನು ಹೊಂದಿದ್ದು ವಿದ್ಯಾವಂತ ವಯಸ್ಕರಿಗೆ ವೃತ್ತಿ ಮತ್ತು ಸಾಂಸ್ಕøತಿಕ ವಿಷಯಗಳಲ್ಲಿ ಮುಂದುವರಿದ ಶಿಕ್ಷಣವನ್ನು ನೀಡುತ್ತವೆ.

ವೃತ್ತಿ ಮತ್ತು ಔದ್ಯೋಗಿಕ ಶಿಕ್ಷಣ

ಕೆನಡದಲ್ಲಿ ವೃತ್ತಿ ಮತ್ತು ಉದ್ಯೋಗ ಶಿಕ್ಷಣಗಳು ವಿಶ್ವವಿದ್ಯಾಲಯದ ಪೂರ್ವದ ಹಂತದಲ್ಲಿ ಪ್ರಾಂತೀಯ ಸರ್ಕಾರಗಳಿಗೆ ಸೇರಿವೆ. ಬಹುಮಟ್ಟಿಗೆ ಅದೆಲ್ಲ ಈ ಶತಮಾನದ ಆರಂಭದಿಂದ ಅಸ್ತಿತ್ವಕ್ಕೆ ಬಂದಿದೆ. 1910 ರಿಂದ ಫೆಡರಲ್ ಸರ್ಕಾರ ಪ್ರಾಂತ್ಯ ಸರ್ಕಾರಗಳ ಈ ಉದ್ಯಮದಲ್ಲಿ ಆಸಕ್ತಿ ತೋರುತ್ತ ಬಂದಿದೆ. ಆದರೆ ಪ್ರಾಂತೀಯ ಸರ್ಕಾರಗಳ ಹಕ್ಕಿಗೆ ಕುಂದು ಬರದಂತೆ, ತಾನು ಧನಸಹಾಯ, ತಜ್ಞರ ನೆರವು ಮುಂತಾದವನ್ನು ಮಾತ್ರ ನೀಡುತ್ತದೆ.

ಒಂದನೆಯ ಮಹಾಯುದ್ಧದವರೆಗೂ ವೃತ್ತಿ ಮತ್ತು ಶಿಕ್ಷಣದಲ್ಲಿ ಜನತೆಗೆ ಆಸಕ್ತಿಯಿರಲಿಲ್ಲ. ಹಾಗೂ ಮಂದಬುದ್ಧಿಯ ಮಕ್ಕಳನ್ನು ಮುಖ್ಯವಾಗಿ ಆ ಶಿಕ್ಷಣಕ್ಕೆ ಸೇರಿಸುತ್ತಿದ್ದುದರಿಂದ ಅದರ ಬಗ್ಗೆ ಜನತೆಗೆ ಗೌರವವೂ ಇರಲಿಲ್ಲ. ರಾಷ್ಟ್ರದ ಅಭಿವೃದ್ಧಿಗೆ ವೃತ್ತಿ ಮತ್ತು ಔದ್ಯೋಗಿಕ ಶಿಕ್ಷಣ ಅಗತ್ಯವಾದಂತೆ ಎಲ್ಲಮಟ್ಟದ ಬುದ್ಧಿಶಕ್ತಿಯವರೂ ಆ ಶಿಕ್ಷಣವನ್ನು ಆರಿಸಿಕೊಳ್ಳುವಂತಾಗಿ ಈಗ ಅದರ ಬಗ್ಗೆ ಗೌರವ ಹೆಚ್ಚುತ್ತ ಬರುತ್ತಿದೆ. ಎರಡನೆಯ ಮಹಾಯುದ್ಧದ ಕಾಲದಲ್ಲಿ ವೃತ್ತಿ ಮತ್ತು ಉದ್ಯೋಗ ಶಿಕ್ಷಣ ಪಡೆದವರ ಅಗತ್ಯ ಹೆಚ್ಚಾಗಿ ಅಂದಿನಿಂದ ಪ್ರಾಂತ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಅವಕ್ಕೂ ಪ್ರಧಾನಸ್ಥಾನ ದೊರಕಿತು.

ಕಾಂಪೊಸಿಟ್ ಹೈಸ್ಕೂಲುಗಳು ವಾಣಿಜ್ಯ, ಕೈಗಾರಿಕೆ, ವ್ಯವಸಾಯ, ಗೃಹ ಅರ್ಥಶಾಸ್ತ್ರ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಶಿಕ್ಷಣವನ್ನು ನೀಡುತ್ತವೆ. ನೋವಸ್ಕೋಷ, ನ್ಯೂ ಬ್ರನ್‍ಸ್‍ವಿಕ್, ವಿನಿಪೆಗ್, ವ್ಯಾಂಕೂವರ್, ಕ್ವಿಬೆಕ್ ಪ್ರಾಂತ್ಯಗಳಲ್ಲಿ ಒಂದೊಂದು ಅಥವಾ ಎರಡೆರಡು ವೊಕೇಷನಲ್ ಅಥವಾ ಟೆಕ್ನಿಕಲ್ ಹೈಸ್ಕೂಲುಗಳೆಂಬ ಪ್ರೌಢಶಾಲೆಗಳಿವೆ. ಆದರೂ ಅವು ಜೊತೆಯಲ್ಲಿ ಸಾಂಸ್ಕøತಿಕ ಶಿಕ್ಷಣವನ್ನೂ ಪ್ರಿಯವೆನಿಸಿದೆ. ಗೃಹ ಅರ್ಥಶಾಸ್ತ್ರ ಅಷ್ಟಾಗಿ ವಿದ್ಯಾರ್ಥಿನಿಯರನ್ನು ಆಕರ್ಷಿಸುತ್ತಿಲ್ಲ.

ಟ್ರೇಡ್ ಸ್ಕೂಲುಗಳು ಅಥವಾ ಟೆಕ್ನಿಕಲ್ ಇನ್ಸ್ಟಿಟ್ಯೂಟುಗಳು ಎಂಬ ಸಂಸ್ಥೆಗಳು ತಾಂತ್ರಿಕ ಹಾಗೂ ಉದ್ಯೋಗ ವಿಜ್ಞಾನದಲ್ಲಿ ಶಿಕ್ಷಣವೀಯುತ್ತವೆ. ಅಲ್ಲಿಗೆ ಪೌಢಶಾಲೆಯ ಶಿಕ್ಷಣವನ್ನು ಮುಗಿಸಿದವರಿಗೆ ಪ್ರವೇಶಾವಕಾಶವುಂಟು. ಪದವೀ ಮಟ್ಟದ ಹಂತದಲ್ಲಿ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣವನ್ನು ನೀಡತಕ್ಕ ಕಾಲೇಜುಗಳನ್ನು ಆಗಲೆ ಸೂಚಿಸಿದೆ.

ಕೆನಡದಲ್ಲಿ ಎಲ್ಲ ವೃತ್ತಿ ಮತ್ತು ಉದ್ಯೋಗ ಶಿಕ್ಷಣ ಸಂಸ್ಥೆಗಳೊಡನೆಯೂ ಉದ್ಯೋಗಗಳು ಸಹಕರಿಸುತ್ತವೆ. ಹಲವು ಕಾರ್ಖಾನೆಗಳೂ ವಾಣಿಜ್ಯ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ಉಮೇದುವಾರಿ ಶಿಕ್ಷಣ ನೀಡುತ್ತವೆ. ಅಲ್ಲಿನ ಶಿಕ್ಷಣದ ಮೇಲ್ವಿಚಾರಣೆಯನ್ನು ಪ್ರಾಂತೀಯ ಕಾರ್ಮಿಕ ಶಾಖೆಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ.

ವೃತ್ತಿ ಮತ್ತು ಉದ್ಯೋಗ ಶಿಕ್ಷಣದ ವೆಚ್ಚವನ್ನು ಪ್ರಾಂತೀಯ ಮತ್ತು ಫೆಡರಲ್ ಸರ್ಕಾರಗಳೆರಡೂ ವಹಿಸಿಕೊಳ್ಳುತ್ತವೆ. ಫೆಡರಲ್ ಸರ್ಕಾರ ಕೆನಡಿಯನ್ ವೊಕೇಷನಲ್ ಟ್ರೈನಿಂಗ್ ಎಂಬ ಶಾಖೆಯನ್ನು ಹೊಂದಿದ್ದು ಆ ಶಾಖೆಯ ಮೂಲಕ ಪ್ರಾಂತೀಯ ಸರ್ಕಾರಕ್ಕೆ ಧನಸಹಾಯವನ್ನು ಹಂಚುತ್ತದೆ. ಪ್ರತಿ ಪ್ರಾಂತ್ಯದಲ್ಲೂ ಆ ಶಾಖೆ ತನ್ನ ಪ್ರತಿನಿಧಿಯನ್ನು ಹೊಂದಿದ್ದು ಆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರೊಡನೆ ಸಂಪರ್ಕವಿಟ್ಟುಕೊಂಡಿದೆ.

ಖಾಸಗಿ ಶಿಕ್ಷಣಸಂಸ್ಥೆಗಳು

ಕೆನಡದಲ್ಲಿ ಸುಮಾರು ಒಂದು ಸಹಸ್ರ ಖಾಸಗಿ ವಿದ್ಯಾಲಯಗಳಿವೆ. ಅವುಗಳಲ್ಲಿ 16 ವಿಶ್ವವಿದ್ಯಾಲಯಗಳು, 163 ಕಾಲೇಜುಗಳು, 828 ಪಾಠಶಾಲೆಗಳು. ಕ್ವಿಬೆಕ್ಕಿನವಲ್ಲದೆ ಮತ್ತಾವ ಶಾಲೆಗಳೂ ಸರ್ಕಾರದ ಬೊಕ್ಕಸದಿಂದ ಧನಸಹಾಯವನ್ನು ಪಡೆಯುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳೆಲ್ಲ ವಿದ್ಯಾರ್ಥಿಗಳನ್ನು ಆಧಿಕ ಸಂಖ್ಯೆಯಲ್ಲಿ ಸೇರಿಸಿಕೊಳ್ಳದೆ ಆಯ್ದ ಕೆಲವರಿಗೆ ಮಾತ್ರ ಪ್ರವೇಶಾವಕಾಶವನ್ನು ಮಿತಿಗೊಳಿಸಿಕೊಳ್ಳುತ್ತಿವೆ. ಬಹುಮಟ್ಟಿಗೆ ಅವು ತಮ್ಮದೇ ಆದ ವ್ಯವಸ್ಥೆಯನ್ನೂ ಬೋಧನ ಕ್ರಮವನ್ನೂ ಆಚರಣೆಗೆ ತಂದಿವೆ. ಮಕ್ಕಳ ಮನಸ್ಸು, ಹೃದಯ ಮತ್ತು ಆತ್ಮ ಇವುಗಳ ಸಂಸ್ಕಾರದ ಮೂಲಕ ಜೀವನದ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ನಾಯಕತನಕ್ಕೆ ಶಿಕ್ಷಣವೀಯುವುದೇ ಇವುಗಳ ಗುರಿ. ಧಾರ್ಮಿಕ ಶಿಕ್ಷಣ ನೀಡಿದ ಕೀರ್ತಿಗೆ ಹೆಸರಾಗಿವೆ. ಇವನ್ನು ಇಂಗ್ಲೆಂಡಿನ ಪಬ್ಲಿಕ್ ಸ್ಕೂಲುಗಳಿಗೆ ಹೋಲಿಸುವುದುಂಟು.

ವಯಸ್ಕರ ಶಿಕ್ಷಣ

ವಯಸ್ಕರಲ್ಲಿ ಅಕ್ಷರ ಪ್ರಚಾರಕ್ಕಾಗಿ ರೂಪುಗೊಂಡಿರುವ ಸಂಸ್ಥೆಗಳು ಕೆನಡದಲ್ಲಿ ಇಲ್ಲ. ಹಾಗೂ ಸಮಾಜ ಶಿಕ್ಷಣವನ್ನೇ ಪ್ರಧಾನ ಕಾರ್ಯಕ್ರಮವನ್ನಾಗಿ ಹೊಂದಿರುವ ಸಂಸ್ಥೆಗಳೂ ಅಪರೂಪ. ಆದರೆ ತಮ್ಮ ಮುಖ್ಯ ಕರ್ತವ್ಯದ ಜೊತೆಗೆ ಗೌಣವಾಗಿ ಆ ಕಾರ್ಯಕ್ರಮವನ್ನೂ ಅಳವಡಿಸಿಕೊಂಡಿರುವ ಬೇರೆ ಬೇರೆ ಸಂಸ್ಥೆಗಳಿವೆ. ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲಾಮಂಡಲಿಗಳು, ಸರ್ಕಾರದ ಕೆಲವು ಸೇವಾಶಾಖೆಗಳು, ಖಾಸಗಿ ಸ್ವಯಂಸಂಸ್ಥೆಗಳು-ಇವು ಸಮಾಜಶಿಕ್ಷಣವನ್ನು ತಮ್ಮ ಪ್ರಧಾನ ಕಾರ್ಯಕ್ಕೆ ಗೌಣವಾಗಿಯೊ ಪ್ರಾಸಂಗಿಕವಾಗಿಯೊ ನಿರ್ವಹಿಸುತ್ತವೆ. ವಿಶ್ವವಿದ್ಯಾಲಯಗಳು ಅದಕ್ಕಾಗಿ ಪ್ರಸಾರಾಂಗಗಳನ್ನು ಸ್ಥಾಪಿಸಿಕೊಂಡಿವೆ; ಪ್ರಾಂತೀಯ ಸರ್ಕಾರಗಳು ಸಾಮುದಾಯಿಕ ಯೋಜನೆ (ಕಮ್ಯುನಿಟಿ ಪ್ರಾಜೆಕ್ಟ್), ವಯಸ್ಕರ ಶಿಕ್ಷಣ ಅಥವಾ ಸಾಂಸ್ಕøತಿಕ ಕಾರ್ಯಕ್ರಮ ಇತ್ಯಾದಿ ಉದ್ದೇಶಗಳಿಗಾಗಿ ಪ್ರತ್ಯೇಕ ಆಡಳಿತ ಶಾಖೆಗಳನ್ನು ಹೊಂದಿದೆ. ಕೆನಡದ ಬ್ರಾಡ್‍ಕ್ಯಾಸ್ಟಿಂಗ್ ಕಾರ್ಪೊರೇಷನ್, ಕೆನಡದ ರಾಷ್ಟ್ರೀಯ ಚಲನ ಚಿತ್ರಮಂಡಲಿ, ಕೆನಡದ ರಾಷ್ಟ್ರೀಯ ವಸ್ತು ಸಂಗ್ರಹಾಲಯ, ರಾಷ್ಟ್ರೀಯ ಚಿತ್ರಶಾಲೆ, ಪ್ರಾಂತೀಯ ವಸ್ತು ಸಂಗ್ರಹಾಲಯಗಳು, ಗ್ರಂಥಾಲಯಗಳು-ಇವೆಲ್ಲ ತಮ್ಮ ತಮ್ಮ ಕಾರ್ಯದ ಅಂಗವಾಗಿ ವಯಸ್ಕರ ಶಿಕ್ಷಣವನ್ನು ನಿರ್ವಹಿಸುತ್ತಿವೆ. ಕೆನಡಿಯನ್ ಅಸೋಸಿಯೇಷನ್ ಫಾರ್ ಅಡಲ್ಟ್ ಎಜುಕೇಷನ್ ಮತ್ತು ಇನ್ಸ್ಟಿಟ್ಯೂಟ್ ಕೆನೇಡಿಯನ್ ಡೆಸ್ ಅಡಲ್ಟಿಸ್ ಎಂಬೆರಡು ಸಂಸ್ಥೆಗಳು ಮೇಲೆ ಸೂಚಿಸಿದ ವಿವಿಧ ಸಂಘ ಸಂಸ್ಥೆಗಳ ಶೈಕ್ಷಣಿಕ ಪ್ರಯತ್ನಗಳನ್ನು ಸಮನ್ವಯಗೊಳಿಸಿಕೊಂಡು ಅವೆಲ್ಲ ಒಂದಕ್ಕೊಂದಕ್ಕೆ ಪೂರಕವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತವೆ.

ಅಧ್ಯಾಪಕರ ವೃತ್ತಿ ಶಿಕ್ಷಣ

ಪ್ರಾಥಮಿಕ ಶಾಲೆಯ ಅಧ್ಯಾಪಕರು ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಒಂದು ವರ್ಷದ ವೃತ್ತಿ ಶಿಕ್ಷಣವನ್ನಾದರೂ ಪಡೆದಿರಬೇಕೆಂದೂ ಪ್ರೌಢಶಾಲೆಯ ಅಧ್ಯಾಪಕರು ವಿಶ್ವವಿದ್ಯಾಲಯದ ಪದವಿಯನ್ನು ಪಡೆದಿದ್ದು ಒಂದು ವರ್ಷದ ವೃತ್ತಿ ಶಿಕ್ಷಣವನ್ನು ಪಡೆದಿರಬೇಕೆಂದೂ ಅನೇಕ ಪ್ರಾಂತ್ಯಗಳಲ್ಲಿ ನಿಯಮ ಮಾಡಲಾಗಿದೆ. ಎರಡನೆಯ ಮಹಾಯುದ್ಧದ ನಂತರ ಅಧ್ಯಾಪಕರು ದೊರಕುವುದು ದುರ್ಲಭವಾದುದರಿಂದ ಈ ನಿಯಮವನ್ನು ಕೆಲವು ಪ್ರಾಂತಗಳಲ್ಲಿ ಸಡಿಲಿಸಲಾಗುತ್ತಿದೆ.
ಪ್ರಾಥಮಿಕ ಶಾಲೆಯ ಅಧ್ಯಾಪಕರ ವೃತ್ತಿ ಶಿಕ್ಷಣಕ್ಕಾಗಿ ನಾರ್ಮಲ್ ಸ್ಕೂಲುಗಳು ವ್ಯವಸ್ಥೆಗೊಂಡಿವೆ. ಸಾಮಾನ್ಯವಾಗಿ ಜೂನಿಯರ್ ಅಥವಾ ಸೀನಿಯರ್ ಮೆಟ್ರೆಕ್ಯುಲೇಷನ್ ಪರೀಕ್ಷೆ ಮುಗಿಸಿದವರಿಗೆ ಅಲ್ಲಿಗೆ ಸೇರಲು ಅವಕಾಶ ನೀಡಲಾಗುವುದು. ಅನೇಕ ಪ್ರಾಂತ್ಯಗಳಲ್ಲಿ ಆ ಶಿಕ್ಷಣ ಒಂದು ವರ್ಷದ ಕಾಲಾವಧಿಯದು. ಕ್ವಿಬೆಕ್ಕಿನ ಕೆಥೊಲಿಕ್ ನಾರ್ಮಲ್ ಸ್ಕೂಲುಗಳಲ್ಲಿ ಅಧ್ಯಾಪಕರಿಗೆ ಮೂರು ವರ್ಷದ ವೃತ್ತಿ ಶಿಕ್ಷಣದ ವ್ಯವಸ್ಥೆಯುಂಟು. ಈಚೆಗೆ ಅಧ್ಯಾಪಕರ ಕೊರತೆಯನ್ನು ನೀಗಲು ಪ್ರವೇಶಾರ್ಹತೆಯನ್ನು ತಗ್ಗಿಸಿರುವುದುಂಟು; ಅಲ್ಪಾವಧಿಯ ವೃತ್ತಿಶಿಕ್ಷಣಕಾರ್ಯ ಕ್ರಮಗಳೂ ಆಚರಣೆಯಲ್ಲಿವೆ.
ಪ್ರೌಢಶಾಲೆಯ ಶಿಕ್ಷಕರ ವೃತ್ತಿ ಶಿಕ್ಷಣ ವಿದ್ಯಾಲಯಗಳಲ್ಲೂ ನೀಡಲಾಗುತ್ತಿದೆ. ಅದು ಒಂದು ವರ್ಷದ ಕಾಲಾವಧಿಯದು. ಆ ಮಟ್ಟದ ಶಿಕ್ಷಣವನ್ನು ಬಿ.ಎಡ್. ಪದವಿಗೆ ಹೋಲಿಸಬಹುದು. ಅದನ್ನು ಮುಗಿಸಿದವರಿಗೆ ಎರಡು ವರ್ಷದ ಮಾಸ್ಟರ್ ಪದವಿಯ ಶಿಕ್ಷಣವನ್ನು ವ್ಯವಸ್ಥೆಗೊಳಿಸಿದೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಮೂರು ವರ್ಷದ ಡಾಕ್ಟರೇಟ್ ಪದವಿಯ ಶಿಕ್ಷಣಕ್ಕೂ ಸೌಲಭ್ಯ ಕಲ್ಪಿಸಿದೆ.

ಈಚೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವೃತ್ತಿಶಿಕ್ಷಣವನ್ನು ಒಂದೇ ಸಂಸ್ಥೆಯಲ್ಲಿ ಏರ್ಪಡಿಸುವ ಪ್ರವೃತ್ತಿ ಕಂಡುಬರುತ್ತಿದೆ. ಆಲ್ಬರ್ಟ ಮುಂತಾದೆಡೆಗಳಲ್ಲಿ ಎಲ್ಲ ಮಟ್ಟದ ಅಧ್ಯಾಪಕರ ಶಿಕ್ಷಣವನ್ನೂ ವಿಶ್ವವಿದ್ಯಾಲಯವೇ ವ್ಯವಸ್ಥೆಗೊಳಿಸುತ್ತಿದೆ.

ಕೆನಡದಲ್ಲಿ ಪ್ರಾಥಮಿಕ ಶಿಕ್ಷಕರ ಕೊರತೆ ಅತಿಯಾಗಿದ್ದು ಅದನ್ನು ನಿವಾರಿಸಲು ಅಧ್ಯಾಪಕರ ವೃತ್ತಿಶಿಕ್ಷಣಕ್ಕೆ ಸೇರತಕ್ಕವರ ವಿದ್ಯಾರ್ಹತೆಯನ್ನು ಕಡಿಮೆ ಮಾಡಿ ಅಭ್ಯರ್ಥಿಗಳಿಗೆ ಆರ್ಥಿಕ ನೆರವನ್ನೂ ನೀಡಲಾಗುತ್ತಿದೆ; ಅಲ್ಪಾವಧಿಯ ವೃತ್ತಿ ಶಿಕ್ಷಣದ ಕಾರ್ಯಕ್ರಮಗಳನ್ನೂ ಏರ್ಪಡಿಸುವುದರೊಂದಿಗೆ ಪರದೇಶದ ಅಧ್ಯಾಪಕರನ್ನೂ ನೇಮಿಸಿಕೊಳ್ಳಲಾಗುತ್ತಿದೆ.
ಶಿಕ್ಷಣದ ವೆಚ್ಚ

ಶಿಕ್ಷಣಕ್ಕಾಗಿ ಕೆನಡ ಸದ್ಯದಲ್ಲಿ ವರ್ಷಂಪ್ರತಿ ಸುಮಾರು ನೂರು ಕೋಟಿ ಡಾಲರ್ ವೆಚ್ಚ ಮಾಡುತ್ತಿದೆ. ಇದು ರಾಷ್ಟ್ರದ ಒಟ್ಟು ಆದಾಯದಲ್ಲಿ ಸೇಕಡ ಮೂರರಷ್ಟಾಗುತ್ತದೆ. ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 35 ಲಕ್ಷ ವಿದ್ಯಾರ್ಥಿಗಳೂ ಖಾಸಗಿ ಶಾಲೆಗಳಲ್ಲಿ 14ಳಿ ಲಕ್ಷ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ. ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ 5 ಲಕ್ಷ ಮಂದಿಯೂ ವಿಶ್ವವಿದ್ಯಾಲಯಗಳಲ್ಲಿ ಸುಮಾರು ಒಂದು ಲಕ್ಷ ಮಂದಿಯೂ ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 1ಳಿ ಲಕ್ಷ ಮಂದಿ ಅಧ್ಯಾಪಕರೂ ಪ್ರಾಧ್ಯಾಪಕರೂ ರಾಷ್ಟ್ರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು ಎರಡು ಕೋಟಿ ಜನಸಂಖ್ಯೆಯುಳ್ಳ ಈ ದೇಶದಲ್ಲಿ ಶಿಕ್ಷಣೋದ್ಯಮದಲ್ಲಿ ಸುಮಾರು ಕಾಲುಭಾಗದಷ್ಟು ಮಂದಿ (ವಿದ್ಯಾರ್ಥಿಗಳೂ ಅಧ್ಯಾಪಕರೂ) ತೊಡಗಿರುವುದರಿಂದ ಶಿಕ್ಷಣ ಇಲ್ಲಿನ ಪ್ರಮುಖ ಉದ್ಯೋಗದಂತಾಗಿದೆ.

ಶಿಕ್ಷಣದಲ್ಲಿ ಫೆಡರಲ್ ಸರ್ಕಾರದ ಆಸಕ್ತಿ: ಶಿಕ್ಷಣ ಪ್ರಾಂತೀಯ ಸರ್ಕಾರದ ಹೊಣೆಯಾಗಿದ್ದರೂ ಫೆಡರಲ್ ಸರ್ಕಾರವೂ ಕೆಲವು ವಿಶಿಷ್ಟ ಕ್ಷೇತ್ರದಲ್ಲಿ ನೇರವಾದ ಹೊಣೆಯನ್ನು ಹೊತ್ತಿದೆ. ವಾಯವ್ಯ ಪ್ರದೇಶಗಳಲ್ಲಿ ಅದು ಕೆಲವು ಪಾಠಶಾಲೆಗಳನ್ನು ತಾನೇ ನಡೆಸುತ್ತಿದೆ; ಅಲ್ಲಿನ ಇನ್ನುಳಿದ ಶಾಲೆಗಳನ್ನು ನಡೆಸುತ್ತಿರುವ ಮಿಷನರಿ ಸಂಸ್ಥೆಗಳಿಗೆ ಸಹಾಯಧನವನ್ನು ನೀಡುತ್ತದೆ; ಇವೆರಡು ಕಾರ್ಯಗಳನ್ನೂ ಫೆಡರಲ್ ಸರ್ಕಾರದ ಉತ್ತರ ಭಾಗದ ವ್ಯವಹಾರಗಳ ಮತ್ತು ನೈಸರ್ಗಿಕ ಸಂಪನ್ಮೂಲಗಳ ಶಾಖೆ ನರ್ವಹಿಸುತ್ತಿದೆ; ಇಡಿ ಕೆನಡದಲ್ಲಿ ಇಂಡಿಯನ್ನರ ಮಕ್ಕಳಿಗಾಗಿ ಏರ್ಪಡಿಸಿರುವ ಶಾಲೆಗಳನ್ನು ಇಂಡಿಯನ್ನರ ವ್ಯವಹಾರ ಶಾಖೆ ನೋಡಿಕೊಳ್ಳುತ್ತಿದೆ. ಈ ಶಾಲೆಗಳಲ್ಲಿ ಕೆಲವು ಸಾಮಾನ್ಯ ಪಾಠಶಾಲೆಗಳು; ಇನ್ನು ಕೆಲವು ವಸತಿ ವಿದ್ಯಾಲಯಗಳು. ವಸತಿ ವಿದ್ಯಾಲಯಗಳನ್ನು ಸಾಮಾನ್ಯವಾಗಿ ಯಾವುದಾದರೂ ಧಾರ್ಮಿಕ ಸಂಸ್ಥೆ ನಡೆಸುತ್ತಿದೆ. ಆ ಸಂಸ್ಥೆಗೆ ಅಲ್ಲಿ ಶಿಕ್ಷಣ ಪಡೆಯುತ್ತಿರುವ ಇಂಡಿಯನ್ನರ ಮಕ್ಕಳ ಸಂಖ್ಯೆಯ ಆಧಾರದ ಮೇಲೆ ಫೆಡರಲ್ ಸರ್ಕಾರ ಧನಸಹಾಯವನ್ನು ನೀಡುತ್ತಿದೆ.          		   				
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ